ಪವಿತ್ರ ರೋಮನ್ ಸಾಮ್ರಾಜ್ಯ -
ಫ್ರಾಂಕೊ-ಜರ್ಮನ್ ದೊರೆಗಳು ಸುಮಾರು ಹತ್ತು ಶತಮಾನಗಳ ಕಾಲ ಆಳಿದ ವೈವಿಧ್ಯಮಯ ಭೂಭಾಗವನ್ನು ಪವಿತ್ರ ರೋಮನ್ ಸಾಮ್ರಾಜ್ಯವೆಂದು ನಿರ್ದೇಶಿಸಲಾಗಿದೆ. ಸ್ಥೂಲವಾಗಿ ಇದು 800ರಲ್ಲಿ ಷಾಲ್‍ನಿಮೇನನ ಕಿರೀಟಧಾರಣೆಯಿಂದ ಆರಂಭವಾಗಿ 1806ರ ವರೆಗೂ ಅಸ್ತಿತ್ವದಲ್ಲಿತ್ತು. ಕ್ರೈಸ್ತ ಚರ್ಚಿನಲ್ಲಿದ್ದ ಸಾರ್ವತ್ರಿಕ ನಂಬಿಕೆ ಹಾಗೂ ಪ್ರಾಚೀನ ರೋಮನ್ ಸಾಮ್ರಾಜ್ಯದ ಜಾಗತಿಕ ರಚನೆಯ ಕಲ್ಪನೆ-ಇವು ಈ ಸಾಮ್ರಾಜ್ಯ ಮಧ್ಯಯುಗದಲ್ಲಿ ಅಸ್ತಿತ್ವಕ್ಕೆ ಬರಲು ಕಾರಣವಾದ ಪ್ರಬಲ ಅಂಶಗಳಾಗಿದ್ದವು ಈ ಸಾಮ್ರಾಜ್ಯ ಕ್ರೈಸ್ತಜಗತ್ತಿನೊಂದಿಗೆ ಹೊಂದಿದ್ದ ಸಂಬಂಧದಿಂದಾಗಿ ಇದಕ್ಕೆ ಪವಿತ್ರ ರೋಮನ್ ಸಾಮ್ರಾಜ್ಯವೆಂಬ ಹೆಸರು ಬಂದಿದೆ. ಇದು ಹೆಚ್ಚು ಪ್ರಚಲಿತವಾಗಿ, ತನ್ನ ಸುದೀರ್ಘ ಜೀವನವನ್ನು ಆರಂಬಿಸಿದ್ದು 10ನೆಯ ಶತಮಾನದ ಮಧ್ಯಭಾಗದಿಂದ ಎಂದು ಹೇಳಬಹುದು. ಮೂಲತಃ ಚರ್ಚಿನ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಷಾರ್ಲ್‍ಮೇನನ ವಿಶಾಲವಾದ ಸಾಮ್ರಾಜ್ಯವನ್ನು ಪುನಶ್ಚೈತನ್ಯಗೊಳಿಸಿ ಪವಿತ್ರ ರೋಮನ್ ಸಾಮ್ರಾಜ್ಯವನ್ನು ಪಶ್ಚಿಮ ಯೂರೋಪಿನಲ್ಲಿ ನಿರ್ಮಿಸಲಾಯಿತು. (962).

ಮೂಲ : ಸುಮಾರು 400 ವರ್ಷಗಳ ಕಾಲ ಭೂಮಧ್ಯ ಪ್ರದೇಶದ ಹಾಗೂ ಪಶ್ಚಿಮ ಯೂರೋಪಿನ ಜನರಿಗೆ ರಾಜಕೀಯ ಏಕತೆ ಮತ್ತು ಸಂರಕ್ಷಣೆನೀಡಿದ ಪ್ರಾಚೀನ ರೋಮನ್ ಸಾಮ್ರಾಜ್ಯ 5ನೆಯ ಶತಮಾನದಲ್ಲಿ ಅಂತ್ಯಗೊಂಡಿತು. ಇದರ ಅಂತ್ಯ 1ನೆಯ ಕಾನ್ಸ್‍ಟಂಟೈನ್ ಚಕ್ರವರ್ತಿ ತನ್ನ ರಾಜಧಾನಿಯನ್ನು ರೋಮ್‍ನಿಂದ ಪೂರ್ವ ಬಿಜಾóನ್ಷಿಯಮ್‍ಗೆ (ಕ್ರಿ.ಶ 330) ವರ್ಗಾಯಿಸಿದಾಗ ಆರಂಭವಾಯಿತು. ಈ ಅವಧಿಯಲ್ಲಿ ಪಶ್ಚಿಮ ಯೂರೋಪು ಜರ್ಮನ್ ಬುಡಕಟ್ಟಿಗೆ ಸೇರಿದ ಅನಾಗರಿಕರ ದಾಳಿಗೆ ತುತ್ತಾಗಿ, ರೋಮ್ ಆಡಳಿತ ಆರ್ಥಿಕ ಮತ್ತು ಭೌದ್ಧಿಕವಾಗಿ ಶಿಥಿಲಗೊಂಡಿತು. ಪ್ರಾಚೀನ ರೋಮಿನ ಕೊನೆಯ ಚಕ್ರವರ್ತಿ ರೋಮ್ಯುಲಸ್ ಅಗಸ್ಟುಲಸನನ್ನು ಗಾತರು ಪದಚ್ಯುತಗೊಳಿಸಿ (476) ಸಾಮ್ರಾಜ್ಯವನ್ನು ಆಕ್ರಮಿಸಿಕೊಂಡರು. ಅದರ ಸ್ಥಾನದಲ್ಲಿ ಕ್ರೈಸ್ತ ಚರ್ಚು ಹತ್ತು ಶತಮಾನಗಳ ಕಾಲಯೂರೊಫಿಗೆ ಶಾಂತಿ ನೀಡಲು ಯತ್ನಿಸಿತು. ಇದರ ಫಲವೇ ಪವಿತ್ರ ರೋಮನ್ ಸಾಮ್ರಾಜ್ಯದ ಉದಯ. ಈ ಸಾಮ್ರಾಜ್ಯ ಪ್ರಾಚೀನ ರೋಮನ್ ಸಾಮ್ರಾಜ್ಯದ ನ್ಯಾಯಬದ್ಧ ಉತ್ತರಾಧಿಕಾರಿಯೆಂದು ಪ್ರತಿಪಾದಿತವಾಯಿತು. ಆದರೆ ವಾಸ್ತವವಾಗಿ ಬಿಜಾóಂಟೀನ್ ಸಾಮ್ರಾಜ್ಯ (ಪೂರ್ವ ರೋಮನ್ ಸಾಮ್ರಾಜ್ಯ, 33-1543) ಪ್ರಾಚೀನ ರೋಮನ್ ಸಾಮ್ರಾಜ್ಯದಿಂದ ನೇರವಾಗಿ ಮುಂದುವರಿದ ಸಾಮ್ರಾಜ್ಯವಾಗಿದ್ದು, ನ್ಯಾಯಬದ್ಧ ಉತ್ತರಾಧಿಕಾರಿಯಾಗಿತ್ತು. ವಸ್ತುತಃ 5ನೆಯ ಶತಮಾನದಲ್ಲಿ ಜರ್ಮನರ ದಾಳಿ ಅದಾಗಿನಿಂದ 9ನೆಯ ಶತಮಾನದ ಆರಂಭದಲ್ಲಿ ಷಾರ್ಲ್‍ಮೇನನ ಪಟ್ಟಾಭಿಷೇಕವಾಗುವರೆಗೆ ಪಶ್ಚಿಮ ಯೂರೋಪಿನಲ್ಲಿ ಹೆಸರಿಸುವಂಥ ಯಾವ ಸಾಮ್ರಾಜ್ಯವೂ ಅಸ್ತಿತ್ವದಲ್ಲಿರಲಿಲ್ಲ. ಷಾರ್ಲ್‍ಮೇನ್ (768-814) ತನ್ನ 46 ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಬರ್ಬರರ ರಾಜ್ಯಗಳನ್ನು ಖಡ್ಗದಿಂದ ಒಂದುಗೂಡಿಸಿ ಕ್ರೈಸ್ತಸಾಮ್ರಾಜ್ಯವನ್ನು ನಿರ್ಮಿಸುವುದರಲ್ಲಿ ಯಶಸ್ವಿಯಾದ. ಇವನ ಸಾಮ್ರಾಜ್ಯ ಬಾಲ್ಟಿಕ್ ಪ್ರದೇಶದಿಂದ ಮೆಡಿಟರೇನಿಯನ್ ಪ್ರದೇಶದ ವರೆಗೆ ವಿಸ್ತರಿಸಿತು. ಪದಚ್ಯುಗೊಳ್ಳುತ್ತಿದ್ದ ಪೋಪ್ 3ನೆಯ ಲಿಯೊನಿಗೆ ರಕ್ಷಣೆಗೆ ನೀಡಿ ಅವನನ್ನು ಉಳಿಸಿದ. ಇದರಿಂದ ಸಂತುಷ್ಟನಾದ ಪೋಪ್ ಕೃತಜ್ಞತಾಪೂರ್ವಕವಾಗಿ ಸಂತ ಪೀಟರ್ ಚರ್ಚಿನಲ್ಲಿ ಷಾರ್ಲ್ ಮೇನನಿಗೆ ಕಿರೀಟವನ್ನು ತೊಡಿಸಿ (800) ರೋಮನ್ ಚಕ್ರವರ್ತಿ ಎಂದು ಘೋಷಿಸಿದ. ಷಾರ್ಲ್‍ಮೇನ್ ಯೂರೋಪಿನ ಇತಿಹಾಸದ ಮಹಾಶಯರುಗಳಲ್ಲಿ ಒಬ್ಬನಾಗಿ ವಿಜೃಂಭಿಸುತ್ತಿದ್ದಾನೆ. ಇವನು ಅಗ್ರಗಣ್ಯ ಯೋಧನೂ ದಕ್ಷ ಆಡಳಿತಗಾರನೂ ಆಗಿದ್ದುದಲ್ಲದೆ ಧರ್ಮದ ಮತ್ತು ವಿದ್ಯೆಯ ಪೋಷಕನಾಗಿದ್ದ. ಇವನ ಕಾಲದಿಂದ ಕ್ರೈಸ್ತ ಪ್ರಪಂಚದಲ್ಲಿ ಎರಡು ಸಾಮ್ರಾಜ್ಯಗಳು ಅಸ್ತಿತ್ವಕ್ಕೆ ಬಂದುವು. ಪೂರ್ವ ರೋಮನ್ ಸಾಮ್ರಾಜ್ಯದ ಜೊತೆಗೆ ಷಾರ್ಲ್‍ಮೇನನ ಸಾಮ್ರಾಜ್ಯ (ಬಿಜಾóಂಟೀನ್) ಅಸ್ತಿತ್ವಕ್ಕೆ ಬಂತು ಇದರ ಮುಂದುವರಿದ ಭಾಗವೇ ಪವಿತ್ರ ರೋಮನ್ ಸಾಮ್ರಾಜ್ಯ. ಇವನ ತರುವಾಯ ಮಕ್ಕಳ ನಡುವೆ ಸಾಮ್ರಾಜ್ಯ ವಿಭಜನೆಗೊಂಡು ಅವನತಿ ಹೊಂದಿತ್ತು. 962ರಲ್ಲಿ ಪೋಪ್ 12ನೆಯ ಜಾನ್ ಜರ್ಮನಿಯ ಸ್ಯಾಕ್ಸನ್ ಅರಸ 1ನೆಯ ಆಟೋಗೆ ಕಿರೀಟಧಾರಣೆ ನೆರವೇರಿಸಿ ಅವನನ್ನು ಪಶ್ಚಿಮ ಸಾಮ್ರಾಜ್ಯದ ಪವಿತ್ರ ರೋಮನ್ ಚಕ್ರವರ್ತಿಯೆಂದು ಘೋಷಿಸಿದ. ಇದು ಪುನಶ್ಚೇತನಗೊಂಡು ಹಳೆಯ ಸಾಮ್ರಾಜ್ಯದ (ಷಾರ್ಲ್‍ಮೇನ್‍ಸಿ ಹೊಸ ಹೆಸರಾಗಿತ್ತು. ಇವು ಜರ್ಮನಿ. ನೆದರ್ಲೆಂಡ್ಸ್, ಬೊಹಿಮಿಯ, ಆಸ್ಟ್ರಿಯ ಸ್ವಿಟ್‍ರ್ಜಲೆಂಡ್, ಬರ್ಗಂಡಿಗಳನ್ನೊಳಗೊಂಡಿತ್ತು. ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್, ಸ್ಕಾಂಡಿನೇವಿಯ ಮತ್ತು ಹಂಗರಿಗಳು ಸೇರಿರಲಿಲ್ಲ. 1ನೆಯ ಆಟೋ ಮತ್ತು ಇವನ ಉತ್ತರಾಧಿಕಾರಿಗಳು ಪವಿತ್ರ ರೋಮನ್ ಸಾಮ್ರಾಜ್ಯದ ಹಿಡಿತವನ್ನು ಬಲಪಡಿಸಿದರು. ಇವನ ತರುವಾಯ ಬಂದ ಚಕ್ರವರ್ತಿಗಳನ್ನು ಪವಿತ್ರ ರೋಮನ್ ಚಕ್ರವರ್ತಿಗಳೆಂದು ಕರೆಯಲಾಗಿದೆ.

ಸಾಮ್ರಾಜ್ಯದ ಸ್ವರೂಪ : ಜರ್ಮನ್ ಅರಸರು ಸಾಮ್ರಾಜ್ಯದ ಮುಖಂಡನನ್ನು ಚುನಾಯಿಸುತ್ತಿದ್ದರು. ಅವನನ್ನು ಜರ್ಮನ್ ದೊರೆ ಅಥವಾ ರೋಮನ್ ದೊರೆ ಎಂದು ನಿರ್ದೇಶಿಸಲಾಗುತ್ತಿತ್ತು. ಪೋಪನಿಂದ ಕಿರೀಟದಾರಣೆಯಾದ ಅನಂತರ ಅವನನ್ನು ರೋಮನ್ ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು. ಸಾಮಾನ್ಯವಾಗಿ ಚಕ್ರವರ್ತಿಗಳು ತಮ್ಮ ಜೀವಿತಕಾಲದಲ್ಲಿಯೇ ತಮ್ಮ ಮಕ್ಕಳು ಉತ್ತರಾಧಿಕಾರಿಗಳಾಗಿ ಚುನಾವಣೆಯಾಗುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ ಸಾಮ್ರಾಜ್ಯದ ಪದವಿ ಕೆಲವೇ ಅರಸುಮನೆತನಗಳಲ್ಲಿ ದೀರ್ಘಕಾಲದ ವರೆಗೆ ಇರುತ್ತಿತ್ತು. ಉದಾಹರಣೆಗೆ, ಸ್ಯಾಕ್ಸನ್ ಅರಸರು. 962ರಿಂದ 1002ರ ವರೆಗೂ ಫ್ರಾಂಕೋನಿಯನ್ನರು. 1024 ರಿಂದ 1125ರ ವರೆಗೂ ಹೂಹೆನ್ಸ್‍ಸ್ಟಾಫನ್ನರು 1138ರಿಂದ 1254ರ ವರೆಗೂ ಹ್ಯಾಪ್ಸ್‍ಬರ್ಗ್ ದೊರೆಗಳು 1273ರಿಂದ 1293ರ ವರೆಗೂ ಮತ್ತೆ 1437ರಿಂದ 1806ರ ವರೆಗೂ ಆಳಿದರು. ತಾತ್ತ್ವಿಕವಾಗಿ ಪವಿತ್ರ ರೋಮನ್ ಚಕ್ರವರ್ತಿಗಳ ಅಧಿಕಾರ ಹಿಂದಿನ ರೋಮನ್ ಚಕ್ರವರ್ತಿಗಳಿದ್ದಷ್ಟೇ ವಸ್ತುತಃ ಅವರು ಒಬ್ಬ ಸಾಮಂತ ಅರಸನಿಗಿಂತ ಸ್ವಲ್ಪ ಹೆಚ್ಚಿನ ಅಧಿಕಾರ ಹೊಂದಿದ್ದರೆನ್ನಬಹುದು. ಈ ಸಾಮ್ರಾಜ್ಯ ನೂರಾರು ಸಾಮಂತ ಅರಸರು ಮತ್ತು ಪಾಳೆಯಗಾರರಿಂದ ಹೆಣೆದುಕೊಂಡಿದ್ದು, ಇವರು ಸಮ್ರಾಟನ ಅಧಿಕಾರವನ್ನು ದುರ್ಬಲಗೊಳಿಸಲು ಯಾವಾಗಲೂ ಹವಣಿಸುತ್ತಿದ್ದರು. ಇವರನ್ನು ಅಧೀನದಲ್ಲಿರಿಸಿಕೊಳ್ಳುವುದು. ಸಮ್ರಾಟನಿಗೆ ಸುಲಭವಾದ ಕಾರ್ಯವಾಗಿರಲಿಲ್ಲ. ಸಮ್ರಾಟ ತನ್ನ ಅಧಿಕಾರವನ್ನು ಜರ್ಮನಿಯಲ್ಲಿ ಸ್ಥಾಪಿಸಲು ಗಮನ ಹರಿಸಿದರೆ ಇಟಾಲಿಯನ್ನರು ದಂಗೆ ಏಳುತ್ತಿದ್ದರು. ಹಾಗೆಯೇ ಇಟಲಿಯಲ್ಲಿ ಅಧಿಕಾರ ಕೇಂದ್ರಿಕರಿಸಲು ಯತ್ನಿಸಿದಾಗ ಜರ್ಮನ್ ಅರಸರು ಸ್ವತಂತ್ರರಂತೆ ವರ್ತಿಸುತ್ತಿದ್ದರು. ಬಲಾಢ್ಯನಾದ ಚಕ್ರವರ್ತಿ ಇವರ ಮೇಲೆ ಅಧಿಕಾರ ಸ್ಥಾಪಿಸುವುದರಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗುತ್ತಿದ್ದ.

ಚುನಾಯಕರು : ಸಾಮ್ರಾಟನನ್ನು ಕೆಲವು ಜರ್ಮನ್ ಪ್ರಭುಗಳು ಚುನಾಯಿಸುತ್ತಿದ್ದರು. ಅವರನ್ನು ಚುನಾಯಕರು ಅಥವಾ ಚುನಾಯಕ ಅರಸರು ಎಂದು ಕರೆಯಲಾಗುತ್ತಿತ್ತು. ಅವರ ಸಂಖ್ಯೆ ಆಗಿಂದಾಗ್ಗೆ ಬದಲಾಗುತ್ತಿತ್ತು. ಸಮ್ರಾಟ 4ನೆಯ ಚಾರ್ಲ್‍ಸ್ (1347-1378) ಚುನಾಯಕರ ಸಂಖ್ಯೆಯನ್ನು ನಿಗದಿಪಡಿಸಲು 1356ರಲ್ಲಿ ಸುವರ್ಣಶಾಸನ ಎಂಬ ಸಂವಿಧಾನವನ್ನು ಜಾರಿಗೆ ತಂದ. ಚಕ್ರವರ್ತಿಯನ್ನು ಚುನಾಯಿಸುವ ಹಕ್ಕನ್ನು ಏಳು ಮಂದಿ ಅರಸರಿಗೆ ನಿಗದಿಪಡಿಸಲಾಯಿತು. ಹೊಸ ಕಾನೂನಿನ ಪ್ರಕಾರ ಚುನಾವಣೆಯ ಕಾರ್ಯದಲ್ಲಿ ಪೋಪ್ ಯಾವ ಪಾತ್ರವನ್ನೂ ವಹಿಸುವ ಹಾಗಿರಲಿಲ್ಲ. ಸಮ್ರಾಟ ಮರಣಹೊಂದಿದ ಒಂದು ತಿಂಗಳೊಳಗೆ ಸಪ್ತಚುನಾಯಕರು ಅವನ ಉತ್ತರಾಧಿಕಾರಿಯನ್ನು ಆಯ್ಕೆಮಾಡಬೇಕಾಗಿತ್ತು. ಈ ಶಾಸನ ಸಾಮ್ರಾಟನ ಚುನಾವಣೆಯ ಕೆಲವು ಅಸ್ಪಷ್ಟ ತೊಡಕುಗಳನ್ನು ನಿವಾರಿಸಿತೆನ್ನಬಹುದು. ಆದರೆ ಜರ್ಮನ್ ಇತಿಹಾಸದಲ್ಲಿ ರಕ್ತಗತವಾಗಿ ಬಂದಿದ್ದ ಪ್ರತ್ಯೇಕವಾದವನ್ನು ನಿರ್ಮೂಲ ಮಾಡಲಾಗಲಿಲ್ಲ. ಪ್ರಮುಖ ಅರಸರ ಪೈಕಿ ಒಬ್ಬ ಸಮ್ರಾಟನಾಗಿ ಚುನಾಯಿತನಾಗುತ್ತಿದ್ದುದ್ದರಿಂದ ಉಳಿದವರು ಪ್ರಭಾವಶಾಲಿಗಳಾಗಿದ್ದು ತಮ್ಮತಮ್ಮ ಸಂಸ್ಥಾನಗಳೊಳಗೆ ಸಂಪೂರ್ಣ ಸಾರ್ವಭೌಮಾಧಿಕಾರವನ್ನು ಪಡೆದಿದ್ದುದರಿಂದ ಸಾಮ್ರಾಟನಿಗೆ ಸಲ್ಲಬೇಕಾದ ಗೌರವವನ್ನು ಕೊಡುತ್ತಿರಲಿಲ್ಲ. ಕಾಲಕ್ರಮದಲ್ಲಿ ಈ ನಡವಳಿಕೆಯಿಂದ ಸಮ್ರಾಟನ ಅಧಿಕಾರ ದುರ್ಬಲವಾಯಿತು.

ಸ್ವತಂತ್ರ ನಗರಗಳು : ಪವಿತ್ರ ರೋಮನ್ ಸಾಮ್ರಾಜ್ಯದಲ್ಲಿ ಕೆಲವು ನಗರಗಳು ಪ್ರಸಿದ್ಧಿಗೆ ಬಂದು ಪ್ರಬಲವಾದುವು. ಇವು ಚಕ್ರವರ್ತಿ ಮತ್ತು ಅರಸರಿಂದ ಸನ್ನದು ಪಡೆದು ವಿಶೇಷ ಸೌಲಭ್ಯಗಳನ್ನು ದೊರಕಿಸಿಕೊಂಡು ಸ್ವಯಂ ಸ್ಥಳೀಯ ಸರ್ಕಾರಗಳನ್ನು ರಚಿಸಿಕೊಂಡಿದ್ದುವು. ತಮ್ಮ ಸ್ವಾತಂತ್ರ್ಯ ಮತ್ತು ವಿಶೇಷ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ತಮ್ಮವೇ ಆದ ಸೈನಿಕ ಮತ್ತು ರಾಜಕೀಯ ಕೂಟಗಳನ್ನು ರಚಿಸಿಕೊಂಡು ಸಮ್ರಾಟನ ಅಧಿಕಾರಕ್ಕೆ ಮತ್ತು ಸಮ್ರಾಜ್ಯದ ಏಕತೆಗೆ ಭಂಗ ಉಂಟು ಮಾಡುತ್ತಿದ್ದುವು. ಚಕ್ರವರ್ತಿಗಳ ಅಧಿಕಾರ ಕ್ಷೀಣಿಸಲಾರಂಭಿಸಿದಾಗ ಇವು ಸ್ವತಂತ್ರ ಗಣರಾಜ್ಯಗಳಾದುವು.

ಪ್ರಬಲ ಚುನಾಯಕರು. ಪ್ರಭಾವಶಾಲಿ ಅರಸರು ಮತ್ತು ಸ್ವತಂತ್ರ ನಗರಗಳ ಜೊತೆಗೆ ಜರ್ಮನಿಯಲ್ಲಿ ಅನೇಕ ಸರದಾರರು ತಂತಮ್ಮ ಪಾಳೆಯಪಟ್ಟುಗಳಲ್ಲಿ ಸಾರ್ವಭೌಮರ ರೀತಿಯಲ್ಲಿ ವರ್ತಿಸುತ್ತಿದ್ದರು ಇವರು ಸ್ವೇಚ್ಛಾಚಾರಿಗಳಾಗಿ ಅಗಿಂದಾಗ್ಗೆ ಕೊಳ್ಳೆ ಸುಲಿಗೆಗಳಲ್ಲಿ ನಿರತರವಾಗಿ ಕಾನೂನುಭಂಗ ಉಂಟುಮಾಡಿ ಸಾಮ್ರಾಜ್ಯಕ್ಕೆ ಹಿಂಸೆಯ ಮೂಲದವಾಗಿದ್ದರು. ಚುನಾಯಕರು ಮತ್ತು ಪ್ರಭುಗಳು ಹಾಗೂ ಸ್ವತಂತ್ರ ನಗರಗಳ ನಡುವೆ ಖಾಸಗಿ ಯುದ್ಧಗಳು ಪದೇ ಪದೇ ನಡೆಯುತ್ತಿದ್ದವು. ಪ್ರತಿಯೊಬ್ಬ ಸಮ್ರಾಟನೂ ಈ ಆಂತರಿಕ ಯುದ್ಧಗಳನ್ನು ಹತ್ತಿಕ್ಕಲು ಹೋರಾಟ ಮಾಡಬೇಕಾಗುತ್ತಿತ್ತು. ಬಲಿಷ್ಠ ಸಮ್ರಾಟರು ಮಾತ್ರ ತಾತ್ಕಾಲಿಕವಾಗಿ ಯಶಸ್ವಿಗಳಾಗುತ್ತಿದ್ದರು.

ಪರಿಷತ್ತು : ಪವಿತ್ರ ರೋಮನ್ ಸಾಮ್ರಾಜ್ಯ ಮಧ್ಯಯುಗದಲ್ಲಿ ಪಾರ್ಲಿಮೆಂಟರಿ ಮಾದರಿಯ ಒಂದು ಸಂಸ್ಥೆಯನ್ನು ರೂಪಿಸಿಕೊಂಡಿತು. ಇದನ್ನು ಡೈಯಟ್ ಎಂದು ಕರೆಯಲಾಗುತ್ತಿತ್ತು. ಇಂದಿನ ರೀತಿಯಲ್ಲಿ ಸಾರ್ವತ್ರಿಕ ಚುನಾವಣೆಯ ಮೂಲಕ ಪ್ರತಿನಿಧಿಗಳು ಪರಿಷತ್ತಿಗೆ ಆಯ್ಕೆಯಾಗುತ್ತಿರಲಿಲ್ಲ. ಅಂದಿನ ಪ್ರತಿನಿಧಿಗಳು ಕೆಲವು ವರ್ಗಗಳ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಿದ್ದರು. ಈ ಪರಿಷತ್ತಿನಲ್ಲಿ ಮೂರು ಅಂಗಗಳಿದ್ದವು. 1 ಚುನಾಯಕ ಕ್ಷೇತ್ರ , 2 ಲೌಕಿಕ ಮತ್ತು ಅಲೌಕಿಕ ಅರಸರ ಕ್ಷೇತ್ರ, 3 ಸ್ವತಂತ್ರ ನಗರಗಳ ಪ್ರತಿನಿಧಿಗಳ ಕ್ಷೇತ್ರ. ಚಕ್ರವರ್ತಿಯ ಆದೇಶದ ಮೇರೆಗೆ ಪ್ರಾಂಕ್‍ಘರ್ಟ್ ನಗರದಲ್ಲಿ ಈ ಪರಿಷತ್ತಿನ ಅಧಿವೇಶನ ನಡೆಯುತ್ತಿತ್ತು. ಚಕ್ರವರ್ತಿಗೆ ಸಲಹೆ ಮತ್ತು ಸಹಾಯ ನೀಡುವುದು. ಇದರ ಮುಖ್ಯ ಕಾರ್ಯವಾಗಿತ್ತು. ಆದರೆ ಅನೇಕ ಸಂದರ್ಭಗಳಲ್ಲಿ ಇದು ಸಮ್ರಾಟನಿಗೆ ಶಕ್ತಿಮೂಲವಾಗುವ ಬದಲು ಹಗರಣದ ಮೂಲವಾಗುತ್ತಿತ್ತು. ಪರಿಷತ್ತಿನ ಪ್ರತಿಯೊಂದು ಅಂಗವೂ ತನ್ನ ವರ್ಗದ ಹಿತಾಸಕ್ತಿಗೆ ಮೊದಲು ಗಮನ ಹರಿಸಿ ಅನಂತರ ಚಕ್ರವರ್ತಿಯ ಹಿತಾಸಕ್ತಿಗಳ ಕಡೆಗೆ ಗಮನ ಹರಿಸುತ್ತಿತ್ತು. ವೈಯಕ್ತಿಕ ಹಿತಾಸಕ್ತಿಗಳ ಹೋರಾಟದಲ್ಲಿ ಸಾಮ್ರಾಜ್ಯಕ್ಕೆಲ್ಲ ಒಟ್ಟಾರೆ ಧಕ್ಕೆ ಬರುತ್ತಿತ್ತು.

ಚರ್ಚು ಮತ್ತು ಸಾಮ್ರಾಜ್ಯದ ನಡುವಣ ಹೋರಾಟ : ರಾಜಕೀಯ ಮತ್ತು ಸಾಮಾಜಿಕ ಬಾಧಕಗಳ ಜೊತೆಗೆ ಪೋಪ್ ಮತ್ತು ಸಮ್ರಾಟನ ನಡುವಣ ಘರ್ಷಣೆಗಳು ಮಧ್ಯಯುಗದಲ್ಲಿ ಪ್ರಮುಖ ಘಟನೆಗಳಾಗಿದ್ದವು ಈ ಕಲಹದಿಂದ ಸಾಮ್ರಾಜ್ಯ ಮತ್ತಷ್ಟು ಅಧೋಗತಿಗೆ ಇಳಿಯಿತು. ಫ್ರಾಂಕೋನಿಯನ್ ಚಕ್ರವರ್ತಿಗಳಾದ 4ನೆಯ ಹೆನ್ರಿ (1056-1100) ಮತ್ತು 5ನೆಯ ಹೆನ್ರಿ (1106-1125) ಇವರ ಕಾಲದಲ್ಲಿ ನೇಮಕಾತಿ ಮತ್ತು ಪದವಿ ದಾನದ ವಿಷಯಗಳಲ್ಲಿ ಮೊದಲ ಬಾರಿಗೆ ವಿರಸ ಆರಂಭವಾಯಿತು. ಪೋಪ್ 7ನೆಯ ಗ್ರಿಗೋರಿ (1073-85) ಚರ್ಚಿನ ಆಡಳಿತವನ್ನು ಸುಧಾರಿಸಲು ಯತ್ನಿಸಿದಾಗ ಅಧಿಕಾರದ ವಿಷಯವಾಗಿ ಕಲಹ ಆರಂಭವಾಯಿತು. ರಾಜರು ಚರ್ಚ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದರೆ ಆಧ್ಯಾತ್ಮಿಕ ಮೌಲ್ಯದ ರಕ್ಷಣೆ ಕಷ್ಟವಾಗುವುದೆಂದು ಪೋಪ್ ಬಗೆದು. ಚಕ್ರವರ್ತಿಗಳು ಚರ್ಚಿನ ಅಧಿಕಾರಿಗಳನ್ನು ನೇಮಿಸುವುದನ್ನು ನಿಷೇಧಿಸಿ ಆಜ್ಞೆ ಹೊರಡಿಸಿದ. ಜರ್ಮನಿ ಮತ್ತು ಉತ್ತರ ಇಟಲಿಯಲ್ಲಿ ಪ್ರಬಲ ವಿರೋಧ ಕಾಣಿಸಿಕೊಂಡಿತು. ಪೋಪನ ಆಜ್ಞೆಯನ್ನು ಪಾಲಿಸಲು 4ನೆಯ ಹೆನ್ರಿ ನಿರಾಕರಿಸಿ ಅವನನ್ನೇ ಪದಚ್ಯುತಗೊಳಿಸಲು ಯತ್ನಿಸಿದ. ಪೋಪ್ ಇದಕ್ಕೆ ಪ್ರತಿಯಾಗಿ ಚಕ್ರವರ್ತಿಯನ್ನು ಚರ್ಚಿನಿಂದ ಹೊರಹಾಕಿದ. ಜರ್ಮನಿಯಲ್ಲಿ ದಂಗೆ ಉಂಟಾದ್ದರಿಂದ ಹೆನ್ರಿ ಭಯಗೊಂಡು. ಪೋಪನೇ ಕ್ಷಮೆಕೇಳಲು ಅವನು ತಂಗಿದ್ದ, ಇಟಲಿಯ ಕ್ಯಾನೋಸ್ ಕೋಟೆಮನೆಗೆ ಕೊರೆಯುವ ಚಳಿಗಾಲದಲ್ಲೇ ಧಾವಿಸಿದ. ಆದರೆ ಪೋಪ್ ಅವನಿಗೆ ಸಂದರ್ಶನ ನೀಡಲು ನಿರಾಕರಿಸಿದ. ಚರ್ಚಿಗೆ ಅವನನ್ನು ಮತ್ತೆ ಸೇರಿಸಿಕೊಳ್ಳಬೇಕಾದರೆ ಅಥವಾ ಅವನನ್ನು ಚಕ್ರವರ್ತಿ ಎಂದು ಮಾನ್ಯಮಾಡಬೇಕಾದರೆ ಪಾಪವಿಮೋಚನೆಗೆ ಅವನು ಬರಿಗಾಲಿನಲ್ಲಿ ಮೂರು ದಿವಸ ಚಳಿಯಲ್ಲಿ ಕ್ಯಾನೋಸ್ ಅಂಗಳದಲ್ಲಿ ನಿಲ್ಲಬೇಕೆಂದು ಆಜ್ಞಾಪಿಸಿದ (1077) ಕ್ಷಮೆ ಪಡೆದು ವಾಪಸಾದ ಅನಂತರ ಹೆನ್ರಿ ತನ್ನ ವಚನವನ್ನು ಪಾಲಿಸಲಿಲ್ಲ. ಕಲಹ ಮತ್ತೆ ಆರಂಭವಾಯಿತು. ಈ ವಿವಾದದಲ್ಲಿ ಸಾಮಂತ ಅರಸರು ಭಾಗವಹಿಸಿದ್ದರಿಂದ ಅನೇಕ ವರ್ಷಗಳ ವರೆಗೆ ಆಂತರಿಕ ಕದನಗಳು ಜರುಗಿದವು. ಪೋಪ್ 7ನೆಯ ಗ್ರಿಗೊರಿಯನ್ನು ರೋಮಿನಿಂದ ಹೊರಹಾಕಲಾಯಿತು. ಇವನು 1085ರಲ್ಲಿ ಗತಿಸಿದ.

ಗ್ರಿಗೊರಿ ಯತ್ನಿಸಿದ ಚರ್ಚ್ ಆಡಳಿತ ಸುಧಾರಣೆಗಳು ಅವನು ಗತಿಸಿದ ಅನೇಕ ವರ್ಷಗಳಾದ ಮೇಲೆ ಅನುಷ್ಠಾನಕ್ಕೆ ಬಂದುವು. 1122ರಲ್ಲಿ ಏರ್ಪಟ್ಟ ವರ್ಮ್‍ಸ್ ಒಪ್ಪಂದ ಅವನ ಕನಸನ್ನು ನನಸು ಮಾಡಿತು. ಚರ್ಚಿನ ಅಧಿಕಾರಗಳನ್ನು ಚುನಾಯಿಸುವ ವಿಷಯದಲ್ಲೇ ಆಗಲಿ, ಪದವಿ ದಾನದ ವಿಷಯದಲ್ಲೇ ಆಗಲಿ, ಚಕ್ರವರ್ತಿ ಹಸ್ತಕ್ಷೇಪ ಮಾಡಬಾರದೆಂದು ಒಪ್ಪಂದವಾಯಿತು. ಅಂತಿಮವಾಗಿ ಚಕ್ರವರ್ತಿಗಳ ಅಧಿಕಾರ ಇಳಿಮುಖವಾಗುವುದಕ್ಕೂ ಪೋಪನ ಅಧಿಕಾರ ವೃದ್ಧಿಯಾಗುವುದಕ್ಕೂ ಇದು ಕಾರಣವಾಯಿತು. ಮುಮ್ಮಡಿ ಇನ್ನೊಸೆಂಟಿನ (1198-1216) ಕಾಲದಲ್ಲಿ ಚರ್ಚಿನ ಅಧಿಕಾರ ಪರಾಕಾಷ್ಠೆ ಮುಟ್ಟಿತು.

ಹೋಹೆನ್‍ಸ್ಟಾಫನ್ ಮನೆತನದ ಚಕ್ರವರ್ತಿ 1ನೆಯ ಫ್ರೆಡ್ರಿಕನ (1152-1190) ಕಾಲದಲ್ಲಿ ಚರ್ಚು ಮತ್ತು ಚಕ್ರಾಧಿಪತ್ಯಗಳ ನಡುವೆ ಪುನಃ ಕಲಹ ಆರಂಭವಾಯಿತು. ಇವನು ಕೆಂಪು ಗಡ್ಡದವನೆಂದು ಹೆಸರಾಗಿದ್ದಾನೆ. ಇವನು ಸಮರ್ಥ ಚಕ್ರವರ್ತಿಯಾಗಿದ್ದು, ಜರ್ಮನಿ ಪೋಲೆಂಡ್, ಡೆನ್ಮಾರ್ಕ್ ಮತ್ತು ಹಂಗರಿಗಳ ಮೇಲೆ ತನ್ನ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿ, ಶಾಂತಿ ಸಮೃದ್ಧಿಗೆ ಕಾರಣನಾಗಿದ್ದು; ಮತ್ತು ಪೂರ್ವ ರೋಮನ್ ಸಾಮ್ರಾಜ್ಯದ ಬಿeóÁಂಟೀನ್ ಚಕ್ರವರ್ತಿಗಳೊಡನೆ ಮೈತ್ರಿಯ ಒಪ್ಪಂದ ಮಾಡಿಕೊಂಡಿದ್ದ. ಇಷ್ಟಾದರೂ ಪೋಪನೊಡನೆ ಇವನ ಸಂಬಂಧ ಹದಗೆಟ್ಟಿತು. ಪೋಪ್ 3ನೆಯ ಅಲೆಗ್ಸಾಂಡರ್ ಲೌಕಿಕ ಸಾಮ್ರಾಜ್ಯಕ್ಕಿಂತ ಆಧ್ಯಾತ್ಮಿಕ ಚರ್ಚ್, ಅಧಿಕಾರ, ಸ್ಥಾನಮಾನಗಳು ಹೆಚ್ಚೆಂದು ಪ್ರತಿಪಾದಿಸಿದ. ಫ್ರೆಡ್ರಿಕ್ ಸಾಮ್ರಾಜ್ಯದ ಹಕ್ಕನ್ನು ಪ್ರತಿಪಾದಿಸಿ ಸಮರ್ಥಿಸಿದ. ಇವರ ನಡುವೆ ಕಲಹ ಆರಂಭವಾಯಿತು. ಪೋಪ್ 1160ರಲ್ಲಿ ಚಕ್ರವರ್ತಿಯನ್ನು ಬಹಿಷ್ಕರಿಸಿ ಅವನನ್ನು ಚರ್ಚಿನಿಂದ ಹೊರಹಾಕಿದ. ಇದಕ್ಕೆ ಪ್ರತಿಯಾಗಿ ಫ್ರೆಡ್ರಿಕ್ ಪೋಪನ ಆಜ್ಞೆಯನ್ನು ಧಿಕ್ಕರಿಸಿ ತನ್ನ ಅನುಯಾಯಿಗಳ ಬೆಂಬಲದಿಂದ ಇಟಲಿಯ ಮೇಲೆ ದಂಡೆತ್ತಿ ಹೋಗಿ ಅವನನ್ನು ಪದಚ್ಯುತಗೊಳಿಸಿ ಅವನ ಸ್ಥಾನದಲ್ಲಿ ಮತ್ತೊಬ್ಬ ಪೋಪನನ್ನು ಆರಿಸಲು ನಿರ್ಧರಿಸಿದ. ಆದರೆ ಚಕ್ರವರ್ತಿಯ ವಿರುದ್ಧ ಅಸ್ತಿತ್ವದಲ್ಲಿದ್ದ ಲಂಬಾರ್ಡ್ ಲೀಗನನ್ನು ಪೋಪ್ ಬಳಸಿಕೊಂಡು ಚಕ್ರವರ್ತಿಯ ಮೇಲೆ ಯುದ್ಧ ಮಾಡಲು ಪ್ರೇರೇಪಿಸಿದ. 1176ರಲ್ಲಿ ನಡೆದ ಯುದ್ಧದಲ್ಲಿ ಚಕ್ರವರ್ತಿ ಸಂಪೂರ್ಣವಾಗಿ ಸೋತು ಒಪ್ಪಂದ ಮಾಡಿಕೊಂಡ; 3ನೆಯ ಅಲೆಗ್ಸಾಂಡರ್ ನ್ಯಾಯಬದ್ಧ ಪೋಪನೆಂದು ಒಪ್ಪಿಕೊಂಡ. ಹೀಗೆ ಚರ್ಚಿನ ಅಧಿಕಾರವನ್ನು ಮೊಟಕುಗೊಳಿಸುವುದರಲ್ಲಾಗಲಿ ಸಾಮ್ರಾಜ್ಯದೊಳಗಿನ ವಿಚ್ಛಿದ್ರಕಾರಕ ಶಕ್ತಿಗಳನ್ನು ಶಾಶ್ವತವಾಗಿ ಹತ್ತಿಕ್ಕುವುದರಲ್ಲಾಗಲಿ ಫೆಡ್ರಿಕ್ ಸಫಲವಾಗಲಿಲ್ಲ.

ಒಂದನೆಯ ಫ್ರಡಿಕನ ಮೊಮ್ಮಗ 2ನೆಯ ಫ್ರೆಡ್ರಿಕನ ಕಾಲದಲ್ಲಿ ಮೂರನೆಯ ಬಾರಿಗೆ ಭಾರಿ ಕಲಹ ಏರ್ಪಟ್ಟಿತು. ಇವನು ಸುಸಂಸ್ಕøತ ಚಕ್ರವರ್ತಿಯಾಗಿದ್ದು. ಅನೇಕ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ. ಇವನು ವಿದ್ವಾಂಸರು ಮತ್ತು ವಿಜ್ಞಾನಿಗಳಿಗೆ ಪೋಷಕನಾಗಿದ್ದನಲ್ಲದೆ ಮುಸ್ಲಿಮರ ಮತ್ತು ಯೆಹೊದಿಗಳ ರಕ್ಷಕನಾಗಿದ್ದ. ಇವನು ರಾಜಕೀಯ ಕುಶಲಮತಿಯಾಗಿದ್ದ; ಸಾಂಪ್ರದಾಯಿಕ ಮತೀಯ ವಿಷಯದಲ್ಲಿ ನಂಬಿಕೆ ಹೊಂದಿರಲಿಲ್ಲ. ಧಾರ್ಮಿಕ ನಡವಳಿಕೆಯ ವಿಷಯದಲ್ಲಿ ಇವನು ಸಂಶಯಗ್ರಸ್ತನಾಗಿದ್ದ. ಸ್ವತಂತ್ರವಾಗಿದ್ದ ಎರಡು ಸಿಸಿಲಿ ರಾಜ್ಯಗಳನ್ನು ಫ್ರೆಡ್ರಿಕ್ ಇಟಲಿಯೊಳಗೆ ವಿಲೀನಗೊಳಿಸಿ ಒಗ್ಗೂಡಿಸಿದ. ಲೌಕಿಕ ರಾಜ್ಯವನ್ನು ನಿರ್ಮಿಸಲು ಯತ್ನಿಸಿದಾಗ ಪೋಪನ ಸಂಶಯ ಖಚಿತವಾಯಿತು. ಪೋಪ್ ಆ ನಗರರಾಜ್ಯಗಳ ಸ್ವಾತಂತ್ರ್ಯಾಪಹರಣವನ್ನು ಸಹಿಸಲಿಲ್ಲ. ಅವನು ಅವುಗಳ ಪರ ವಹಿಸಿ, ಚಕ್ರವರ್ತಿಯನ್ನು ಕ್ರೈಸ್ತ ಚರ್ಚಿನಿಂದ ಬಹಿಷ್ಕಿರಿಸಿದ. ಇವರಿಬ್ಬರ ನಡುವೆ ಅನೇಕ ವರ್ಷಗಳ ಕಾಲ ಸೈನಿಕ ಹಾಗೂ ವಾಕ್ ಯುದ್ಧಗಳು ಮುಂದುವರಿದುವು. ಇಟಲಿ ಜರ್ಮನಿಗಳಲ್ಲಿ ಎರಡು ಬಣಗಳೇರ್ಪಟ್ಟವು. ಕೊನೆಯಲ್ಲಿ ಪೋಪನ ಕಡೆಯವರು ಮೇಲುಗೈ ಪಡೆದರು. ಸಾಮ್ರಾಜ್ಯದ ಸೈನ್ಯವನ್ನು ಉತ್ತರ ಇಟಲಿಯಿಂದ ಹೊಡೆದೋಡಿಸಲಾಯಿತು. 1245ರಲ್ಲಿ ಪೋಪ್ ಚರ್ಚಿನ ಮಹಾಸಭೆಯ ಅಧಿವೇಶನವನ್ನು ಕರೆದು 2ನೆಯ ಪ್ರೆಡ್ರಿಕನನ್ನು ಪದಚ್ಯುತಗೊಳಿಸಿದ. ಈ ಘಟನೆ ನಡೆದ ಐದು ವರ್ಷಗಳ ಅನಂತರ ಫ್ರೆಡ್ರಿಕ್ ಗತಿಸಿದ. ಇಟಲಿ ಸಂಪೂರ್ಣವಾಗಿ ಸಾಮ್ರಾಜ್ಯದಿಂದ ಬೇರ್ಪಟ್ಟಿತು.

ಎರಡನೆಯ ಫ್ರೆಡ್ರಿಕನ ಮರಣದೊಂದಿಗೆ ಹೋಹೆನ್‍ಸ್ಟಾಫನ್ ಚಕ್ರವರ್ತಿಗಳು ಪಶ್ಚಿಮ ಯೂರೋಪಿನಲ್ಲಿ ಪ್ರಬಲ ಸಾಮ್ರಾಜ್ಯ ನಿರ್ಮಿಸುವ ಕೊನೆಯ ಅವಕಾಶ ಅಂತ್ಯಗೊಂಡಿತು. 1250-1273ರ ಕಾಲವನ್ನು ಕ್ರಮಪ್ರಾಪ್ತ ಸಮ್ರಾಟನಿಲ್ಲದ ಕಾಲ ಎಂದು ಕರೆಯಲಾಗಿದೆ. ಈ ಅವಧಿಯಲ್ಲಿ ಯೂರೋಪಿನ ವಿವಿಧ ಅರಸರು ಪದವಿಗಾಗಿ ಸ್ಪರ್ಧೆ ನಡೆಸಿದರು. ಪೋಪ್ ತಾನೇ ಚಕ್ರವರ್ತಿಯನ್ನು ನೇಮಿಸುವುದಾಗಿ ಬೆದರಿಕೆ ಹಾಕಿದಾಗ ಜರ್ಮನಿಯ ಚುನಾಯಕರು 1273ರಲ್ಲಿ ಹ್ಯಾಬ್ಸ್‍ಬರ್ಗ್ ಮನೆತನದ ರುಡಾಲ್ಫನನ್ನು ಚಕ್ರವರ್ತಿಯಾಗಿ ಚುನಾಯಿಸಿದರು. ಇವನು ಆಸ್ಟ್ರಿಯ ಪ್ರಾಂತ್ಯವನ್ನು ತನ್ನ ಮನೆತನದ ಸ್ವಾಧೀನಕ್ಕೆ ಸೇರ್ಪಡೆ ಮಾಡಿಕೊಂಡದ್ದು ಒಂದು ಪ್ರಮುಖ ಘಟನೆ. 1278ರಿಂದ 1318ರ ವರೆಗೂ ಆಸ್ಟ್ರಿಯ ಹ್ಯಾಬ್ಸ್‍ಬರ್ಗ್ ಮನೆತನದ ಸ್ವಾಧೀನದಲ್ಲೆ ಇತ್ತು. ರುಡಾಲ್ಫನ ಮರಣದ ತರುವಾಯ (1291) ಸುಮಾರು ಒಂದೂವರೆ ಶತಮಾನಗಳ ಕಾಲ ಬೇರೆ ಬೇರೆ ಅರಸುಮನೆತನದವರನ್ನು ಜರ್ಮನ್ ದೊರೆಗಳಾಗಿ ಚುನಾಯಿಸಿ, ವಿಧಿವತ್ತಾಗಿ ಪಟ್ಟಾಭಿಷೇಕ ನೆರವೇರಿಸಿ ಪವಿತ್ರ ರೋಮನ್ ಚಕ್ರವರ್ತಿಗಳೆಂದು ನಿರ್ದೇಶಿಸಲಾಗುತ್ತಿತ್ತು. ಇವರಲ್ಲಿ ಲುಕ್ಸೆಂಬರ್ಗಿನ 7ನೆಯ ಹೆನ್ರಿ (1308-1313), ಬವೇರಿಯದ 4ನೆಯ ಲೂಯಿ (1314-1347) ಲುಕ್ಸೆಂಬರ್ಗಿನ 4ನೆಯ ಚಾರ್ಲ್‍ಸ್ (1347-1378) ಪ್ರಮುಖರು.

1437ರ ತರವಾಯ ಆಸ್ಟ್ರಿಯದ ಹ್ಯಾಬ್ಸ್‍ಬರ್ಗ್ ಮನೆತನದವರು ಅವಿಚ್ಛಿನ್ನವಾಗಿ ಪವಿತ್ರ ರೋಮನ್ ಚಕ್ರವರ್ತಿಗಳಾಗಿ ಚುನಾಯಿತರಾಗುತ್ತಿದ್ದರು. ಈ ಮನೆತನದವರು ಪೋಪನ ಮೇಲಾಗಲಿ ಇಟಲಿಯ ಪ್ರಾಂತ್ಯಗಳ ಮೇಲಾಗಲಿ ಅಧಿಕಾರ ಚಲಾಯಿಸುತ್ತಿರಲಿಲ್ಲ. ಈ ಮನೆತನದ 2ನೆಯ ಚಾರ್ಲ್‍ಸನ ಕಾಲದಲ್ಲಿ (1519-1556) ಸಾಮ್ರಾಜ್ಯ ನಿರ್ವೀರ್ಯವಾಗಿತ್ತು. ಪೋಪರು ಕೆಲವು ಸಮ್ರಾಟರೊಡನೆ ವ್ಯಾಜ್ಯ ಮಾಡಿದರೂ ಚರ್ಚಿಗೆ ಬೆಂಬಲವಾದ ಲೌಕಿಕ ರಾಜ್ಯವೊಂದರ ಅಗತ್ಯವನ್ನು ಮನಗಂಡಿದ್ದರು. ದೊರೆಗಳು ಮತ್ತು ನಗರ ರಾಜ್ಯಗಳವರು ಚಕ್ರವರ್ತಿಯ ಅಧಿಕಾರವನ್ನು ಉಲ್ಲಂಘಿಸಿದರೂ ಚಕ್ರವರ್ತಿಯ ಪದವಿಗೆ ನಮ್ರ ಗೌರವ ತೋರಿಸುತ್ತಿದ್ದರು. ಈ ಸಾಮ್ರಾಜ್ಯದ ಸುದೀರ್ಘ ಜೀವನಕ್ಕೆ ಪರಂಪರೆ ಮತ್ತು ಸಂಪ್ರದಾಯಗಳೇ ಮೂಲಶಕ್ತಿಯಾಗಿದ್ದುವೆಂದು ಹೇಳಬಹುದು.								(ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ